• Pupils   |
  • Parents   |
  • Comunity

ಎಸ್.ಎಸ್.ವಿದ್ವಾನ್ ಸಂಗೀತ ಪಾಠಶಾಲೆ ಆರಂಭ ಮತ್ತು ಉದ್ದೇಶ

ಇಂದು ಪಾಶ್ಚಿಮಾತ್ಯ ಸಂಗೀತದ ಅಬ್ಬರದ ಅಲೆಗಳಲ್ಲಿ, ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತವು ನಶಿಸುವ ಸ್ಥಿತಿಯಲ್ಲಿ ಕೂಡ ನಮ್ಮ ನಾಡಿನ ಹಿರಿಯ ಶಾಸ್ತ್ರೀಯ ಸಂಗೀತ ದಿಗ್ಗಜರು, ವಿವಿಧ ಸಂಗೀತ ಗಾಯನ ಹಾಗೂ ವಾದ್ಯಗಳ ಕಠಿಣ ಪರಿಶ್ರಮದ ಮೂಲಕ ತಮ್ಮ ಕೈಲಾದ ಮಟ್ಟಿಗೆ ನಮ್ಮ ಶಾಸ್ತ್ರೀಯ ಸಂಗೀತವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕವಿ, ಸಾಹಿತಿ, ನಾಟಕ, ಕಥೆ, ಕಾದಂಬರಿ, ಚಿತ್ರ ಸಾಹಿತಿ, ಹಿರಿಯ ಜಿಲ್ಲಾ ನೋಂದಣಿ ಅಧಿಕಾರಿ ಶ್ರೀ ಎಸ್.ಎಸ್.ವಿದ್ವಾನ್ ರವರು ತಮ್ಮ ಶಿಕ್ಷಣ ಪೂರೈಕೆಯ ಸಮಯದಲ್ಲಿ ಅಂದರೆ ಕ್ರಿ.ಶ. 1955 ರ ಆಸುಪಾಸಿನಲ್ಲಿ ನಗರದ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದಂತಹ ಪಂಡಿತ ಶ್ರೀ ಅಂಬೇಕರ ಗುರುಗಳ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದರು, ಸ್ವತ: ಹಾರ್ಮೊನಿಯಂ ಕೂಡಾ ನುಡಿಸುತ್ತಿದ್ದರು, ಮುಂದೆ ಸರ್ಕಾರದ ಉನ್ನತ ಹುದ್ದೆಯಲ್ಲಿ ನೇಮಕವಾದ ನಂತರ ತಮ್ಮ ಒತ್ತಡದ ಕಾರ್ಯದಲ್ಲಿಯೂ ಕೂಡಾ ಸಂಗೀತದಲ್ಲಿ ಬಹಳ ಅಭಿರುಚಿ ಹೊಂದಿದ್ದರು ಎಂಬುದಕ್ಕೆ ಅವರು ಮೈಸೂರು ನಗರದಲ್ಲಿ ಸಂಗೀತ ವಿದ್ಯಾಲಯ ಪ್ರಾರಂಭ ಮಾಡಿದ್ದರು, ಅಂತೆಯೇ ಇವರು ಸಂಗೀತ, ಸಾಹಿತ್ಯ, ಲಲಿತಕಲೆ ಪ್ರೇಮಿಯಾಗಿದ್ದ ಕಾರಣ ಅನೇಕ ಕವನ, ಕಥೆ, ಕಾದಂಬರಿ, ನಾಟಕಗಳನ್ನು ರಚಿಸಿದ್ದಾರೆ. ಶ್ರೀಯುತರ ಅನೇಕ ನಾಟಕಗಳು ಧಾರವಾಡ ಆಕಾಶವಾಣಿಯಲ್ಲಿ ಪ್ರಸಾರಗೊಂಡಿವೆ. ಇವರು ಕನ್ನಡ ಸಾಹಿತ್ಯದ ಸಾರಸ್ವತ ಲೋಕದಲ್ಲಿ “ನಂದೀ ನಂದನ” ಎಂಬ ಕಾವ್ಯನಾಮದಿಂದ ತಮ್ಮ ಕೃತಿಗಳನ್ನು ರಚಿಸಿ ಪ್ರಸಿದ್ದರಾಗಿದ್ದರು. ಇವರು ತಮ್ಮ ಮುದ್ದಿನ ಸುಪುತ್ರನ ಅಗಲಿಕೆಯಿಂದ ಪುತ್ರನ ಹೆಸರನ್ನು ಚಿರಸ್ಥಾಯಿಗೊಳಿಸುವ ದಿಸೆಯಲ್ಲಿ ಗುರುಕುಮಾರ ಮೆಮೊರಿಯಲ್ ಟ್ರಸ್ಟ ಸ್ಥಾಪನೆ ಮಾಡಿದರು. ಎಸ್.ಎಸ್.ವಿದ್ವಾನ್ ರವರು ವಯೋ..ಸಹಜ ಕಾಯಿಲೆಯಿಂದ ದಿನಾಂಕ :27-08-2016 ರಂದು ವಿಧಿವಶರಾಗುತ್ತಾರೆ. 
 
ಲಂಡನ್ ನಗರದಲ್ಲಿ ವೈದ್ಯಕೀಯ ಸೇವೆ ಮಾಡುತ್ತಿರುವ ಡಾ. ವಿಶ್ವನಾಥ ಸಿದ್ದಪ್ಪ ಅವರು ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲಿ ಅವರು ಬಿಟ್ಟು ಹೋದ ಆದರ್ಶ, ಧ್ಯೇೀಯಗಳನ್ನು ಮೈಗೂಡಿಸಿಕೊಂಡು ಗುರುಕುಮಾರ ಮೆಮೋರಿಯಲ್ ಟ್ರಸ್ಟನ ಅಧ್ಯಕ್ಷಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡರು “ಸೇವೆ” -ಉಪಕಾರವಲ್ಲ ಅದು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಕರ್ತವ್ಯ ಮತ್ತು ಜವಾಬ್ದಾರಿಯೆಂದು ಅರಿತು ಕಲೆ, ಸಾಹಿತ್ಯ, ಸಂಗೀತದಲ್ಲಿ ಗುರುತಿಸಿಕೊಂಡ ಎಸ್.ಎಸ್.ವಿದ್ವಾನ್ ರವರ ಹೆಸರನ್ನು ಮುಂದಿನ ಪೀಳಿಗೆಗೆ ಕಲೆ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿಸಲು ಭಾರತೀಯ ಶಾಸ್ತ್ರೀಯ ಸಂಗೀತದ ಉಳಿವಿಗಾಗಿ, “ಸಂರಕ್ಷಣೆ, ಪ್ರೋತ್ಸಾಹ, ಪೋಷಣೆ” ಎಂಬ ದ್ಯೇಯ ವಾಕ್ಯಗಳ ಅಡಿಬರಹದಲ್ಲಿ “ಎಸ್.ಎಸ್.ವಿದ್ವಾನ್ ಮೆಮೋರಿಯಲ್” ಭಾರತೀಯ ಶಾಸ್ತ್ರೀಯ ಸಂಗೀತ ಪಾಠಶಾಲೆ-“ನಂದನಂ” ನಾಡಿನ ಸಂಗೀತ ಪ್ರೇಮಿಗಳಿಗೆ ಸೆಪ್ಟಂಬರ-9 2017 ರಂದು ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಾಯಕರಾದಂತಹ ಪಂಡಿತ ಶ್ರೀ ಗಣಪತಿ ಭಟ ಹಾಸಣಗಿ ಅವರಿಂದ ಲೋಕಾರ್ಪಣೆಗೊಳಿಸುತ್ತಾರೆ. 
 
ಜನಸಾಮಾನ್ಯರು ಕೂಡಾ ಸಂಗೀತದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು, ಭಾರತೀಯ ಶಾಸ್ತ್ರೀಯ ಸಂಗೀತವನ್ನು ಕಲಿಯಬೇಕು ಮತ್ತು ಕಲಿಸಬೇಕು ಎನ್ನುವ ಸದುದ್ದೇಶದಿಂದ ಆರಂಭಿಸಿದ ಎಸ್.ಎಸ್.ವಿದ್ವಾನ್ ಮೆಮೋರಿಯಲ್ ಭಾರತೀಯ ಶಾಸ್ತ್ರೀಯ ಸಂಗೀತ ಪಾಠಶಾಲೆ ಇದರ ನುಡಿಬರಹ “ನಂದನಂ” ಕೂಡ ಎಸ್.ಎಸ್.ವಿದ್ವಾನ್ ರವರ ಕಾವ್ಯನಾಮ “ನಂದೀ ನಂದನ” ದಿಂದ ಆಯ್ದುಕೊಂಡ ಪದವೆ. “ನಂದನಂ” ಭಾರತೀಯ ಶಾಸ್ತ್ರೀಯ ಸಂಗೀತದ ಸಮಸ್ತ ಶಾಖೆಗಳನ್ನು ಒಂದೇ ಸೂರಿನ ಅಡಿಯಲ್ಲಿ ಕಲಿಸುವುದು ಮತ್ತು ಕಲಿಯುವುದು ಎಂಬ ಒಕ್ಕಣಿಕೆಯೊಂದಿಗೆ ಸಂಗೀತ ಪಾಠಶಾಲೆ ಮುನ್ನಡೆಗೆ ಸಜ್ಜಾಗಿದೆ. 
 
ಅದೊಂದು ಕಾಲವಿತ್ತು ನಮ್ಮ ಭಾರತೀಯ ಪರಂಪರೆಯ ಭಾಗವಾಗಿದ್ದ ಸಾಹಿತ್ಯ, ಸಂಗೀತ, ಲಲಿತ ಕಲೆಗಳನ್ನು ಹಿಂದಿನ ರಾಜಮಹಾರಾಜರು ಪ್ರೋತ್ಸಾಹಿಸಿ ಬೆಳೆಸುತ್ತಿದ್ದರು, ಕವಿ ಸಂಗೀತಗಾರ ಕಲಾವಿದರಿಗೆ ಅನುಕೂಲ ಒದಗಿಸಿ ತಮ್ಮ ಆಸ್ಥಾನದಲ್ಲಿ ಆಶ್ರಯ ನೀಡುತ್ತಿದ್ದರು. ಹೀಗಾಗಿ ನಮ್ಮ ಭಾರತೀಯ ಪರಂಪರೆಯಲ್ಲಿ ಕಲೆ, ಸಾಹಿತ್ಯ, ಸಂಗೀತಗಳು ಉಳಿದು ಬೆಳೆಯಲು ರಾಜಮಹಾರಾಜರ ಕೊಡುಗೆ ಪ್ರಮುಖ ಕಾರಣವಾಗಿದ್ದವು. 
 
ಈ ದಿಸೆಯಲ್ಲಿ ಎಸ್.ಎಸ್.ವಿಧ್ವಾನ್ ಮೆಮೋರಿಯಲ್ ಭಾರತೀಯ ಶಾಸ್ತ್ರೀಯ ಸಂಗೀತ ಪಾಠಶಾಲೆ ಆರಂಭಗೊಳ್ಳಲು ಕಾರಣಿಭೂತವಾಗಿದ್ದು ಹುಬ್ಬಳ್ಳಿ ಮಹಾನಗರದಲ್ಲಿ ಪದ್ಮಭೂಷಣ ಡಾ: ಗಂಗೂಬಾಯಿ ಹಾನಗಲ್ಲ ಸಂಗೀತ ಪ್ರತಿಷ್ಠಾನವನ್ನು ಸರ್ಕಾರವೇ ನಿರ್ಮಿಸಿ ಈ ಭಾಗದ ಸಂಗೀತ ಪ್ರೀಯರಿಗೆ ಸಂಗೀತ ಸೇವೆಗೆ ಅನುವು ಮಾಡಿಕೊಟ್ಟಿದೆ. ಪಾಶ್ಚಿಮಾತ್ಯ ಸಂಗೀತದ ಗದ್ದಲದ ನಡುವೆ ನಮ್ಮ ಭಾರತೀಯ ಸಂಗೀತ ಪರಂಪರೆಯನ್ನು ನೀರುಣಿಸಿ ಬೆಳೆಸಲು ಗುರುಕುಮಾರ ಮೆಮೋರಿಯಲ್ ಟ್ರಸ್ಟ ಮುಂದಾಗಿದ್ದು ಇದರ ಹಿಂದಿನ ಕತೃತ್ವ ಶಕ್ತಿ ಡಾ: ವಿಶ್ವನಾಥ ಸಿದ್ದಪ್ಪ ಅವರು.  ತಮ್ಮ ವೈದ್ಯಕೀಯ ಕ್ಷೇತ್ರದಲ್ಲಿ ಬಿಡುವಿಲ್ಲದ ಒತ್ತಡದಲ್ಲಿಯೂ ಕೂಡಾ ಸಂಗೀತದ ಸಂರಕ್ಷಣೆಗೆ ಪ್ರೋತ್ಸಾಹ ಪೊಷಣೆ ಎಂಬ ದ್ಯೇಯ ವಾಕ್ಯಗಳೊಂದಿಗೆ ಡಾ: ಗಂಗೂಬಾಯಿ ಹಾನಗಲ್ಲ ಸಂಗೀತ ಪ್ರತಿಷ್ಠಾನದ ಹಿರಿಯ ಸಂಗೀತ ಗುರುಗಳ ಸಲಹೆ ಮಾರ್ಗದರ್ಶನದಲ್ಲಿ ಎಸ್.ಎಸ್.ವಿದ್ವಾನ್ ಮೆಮೋರಿಯಲ್ ಭಾರತೀಯ ಶಾಸ್ತ್ರೀಯ ಸಂಗೀತ ಪಾಠಶಾಲೆ “ನಂದನಂ” ಇಂದು ಸದ್ದುಗದ್ದಲ ವಿಲ್ಲದೇ ಸಂಗೀತ ಸೇವೆಯಲ್ಲಿ ತೊಡಗಿದೆ. 
 
ನಂದನಂ ಭಾರತೀಯ ಶಾಸ್ತ್ರೀಯ ಸಂಗೀತ ಪಾಠಶಾಲೆಯು ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ರಚನಾತ್ಮಕವಾಗಿ ಶಾಸ್ತ್ರೀಯ ಸಂಗೀತದ ಸಂಪೂರ್ಣ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ತನ್ನ ಅಂಬೆಗಾಲನ್ನು ಇಡುತ್ತ ಸಾಗುತ್ತಿದೆ. ಭರತನಾಟ್ಯ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸರಿಗಮಪದನಿಸ ಮತ್ತು ಥೈಥೈಥೈತಕ್, ಎಂಬ ಸಪ್ತ ಸ್ವರಗಳ ಜೊತೆಗೆ ಇಂಪಾದ ತಬಲಾ ಮತ್ತು ಸಂತೂರು, ಕೊಳಲು ವಾದನ ಕಂಪು ಅಲೆಲೆಯಾಗಿ ತೇಲುತ್ತಾ ನಿತ್ಯವು ಆಲಿಸುವ ಕಲಿಯುವ ಮನಗಳಿಗೆ ಸಂಗೀತದ ರಸದೌತಣವನ್ನು ಉಣಬಡಿಸುತ್ತಿದೆ. 
 
ಎಸ್.ಎಸ್.ವಿದ್ವಾನ್ ಮೆಮೋರಿಯಲ್ ಭಾರತೀಯ ಶಾಸ್ತ್ರೀಯ ಸಂಗೀತ ಪಾಠಶಾಲೆ “ನಂದನಂ” ಸ್ಥಾಪನೆಗೆ ಕಾರಣಿಭೂತರಾದ ಡಾ: ವಿಶ್ವನಾಥ ಸಿದ್ದಪ್ಪ ಅವರು ಒಬ್ಬ ಕ್ರೀಯಾಶೀಲ ವ್ಯಕ್ತಿ.  ಅವರಲ್ಲಿನ ಸಮಯ ಪ್ರಜ್ಞೆ, ಕಾಯಕ ನಿಷ್ಠೆಯೂ ಗುರುಕುಮಾರ ಮೆಮೋರಿಯಲ್ ಟ್ರಸ್ಟನ ಮೂಲಕ ಸಂಗೀತ ಕ್ಷೇತ್ರದಲ್ಲಿ ಶಾಸ್ತ್ರೀಯ ಸಂಗೀತದ ಅಳಿವು ಉಳಿವಿಗೆ ತಮ್ಮ ಕೈಲಾದ ಮಟ್ಟಿಗೆ ಆಸಕ್ತಿ ವಹಿಸಿ ಶ್ರಮಿಸುತ್ತಿದ್ದಾರೆ, ಅವರ ಒಂದು ಸತತ ಪ್ರಯತ್ನ ಮತ್ತು ಸಮಯ ಪ್ರಜ್ಞೆಯು ಮುಂದೆ ನಮ್ಮ ನಾಡಿಗೆ ಉತ್ತಮ ಸಂಗೀತಗಾರರನ್ನು ಸಿದ್ದಪಡಿಸಿ ಸಂಗೀತ ಕ್ಷೇತ್ರವನ್ನು ಹೆಚ್ಚು ಶ್ರೀಮಂತಗೊಳಿಸುವ ಇವರ ಸಂಗೀತ ಸೇವೆ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಒಂದು ಕೊಡುಗೆ ಎನ್ನಬಹುದು. 
 
ಶಾಸ್ತ್ರೀಯ ಸಂಗೀತವನ್ನು ಉಳಿಸಿ ಬೆಳೆಸುವ ಇವರ ದೃಢ ನಿರ್ಧಾರ ಭಾರತೀಯ ಶಾಸ್ತ್ರೀಯ ಪರಂಪರೆಯನ್ನು ತಿಳಿದುಕೊಂಡು ಸಂಗೀತ ಸಂರಕ್ಷಣೆ, ಪ್ರೋತ್ಸಾಹ ಪೋಷಣೆ ಮಾಡುವ ಕಾರ್ಯದಲ್ಲಿ ಮುಂದಾಗಬೇಕೆಂದು ಎಸ್.ಎಸ್.ವಿಧ್ವಾನ್ ಮೆಮೋರಿಯಲ್ ಭಾರತೀಯ ಶಾಸ್ತ್ರೀಯ ಸಂಗೀತ ಪಾಠಶಾಲೆ “ನಂದನಂ” ದ ಮೂಲ ಗುರಿಯಾಗಿದೆ.  
 
 
-ಕೃಷ್ಣಾ ಜಕ್ಕಪ್ಪನವರ