• Pupils   |
  • Parents   |
  • Comunity

ಸಾಹಿತಿ, ಕಥೆಗಾರ, ನಾಟಕ-ಕಾದಂಬರಿಕಾರ, ಕಾವ್ಯ-ಸಂಗೀತಗಾರ, ಗುರುಕುಮಾರ ಮೆಮೋರಿಯಲ್ ಟ್ರಸ್ಟನ ಸಂಸ್ಥಾಪಕರಾದ ಶ್ರೀ ಎಸ್.ಎಸ್. ವಿದ್ವ್ವಾನ್ (ಸಿದ್ದಪ್ಪ ಶಿವನಪ್ಪ ವಿದ್ವಾನ್) ಜನನ ಮತ್ತು ಹಿನ್ನೆಲೆ

ಬಡತನದಲ್ಲಿ ಜನಿಸುವುದು ತಪ್ಪಲ್ಲ, ಆದರೆ ಬಡತನದ ಬೇಗುದಿಯಲ್ಲಿ ಜೀವನ ಸವೆಸಿ, ಸೆಟೆದು ನಿಲ್ಲುವ ಹಠಮಾರಿತನ ಇದು ಯಾವುದೇ ವಿಶ್ವವಿದ್ಯಾಲಯಗಳು ಕಲಿಸಲಾರದ ಬದುಕಿನ ಅನುಭವದ ಪಾಠಗಳನ್ನು ಕಲಿಸುತ್ತದೆ. ಇಂಥ ಒಂದು ಸನ್ನಿವೇಶ, ಪ್ರಕೃತಿಯು ಮುನಿಸಿಕೊಂಡಾಗ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಕಾಣುತ್ತೇವೆ, ಅದುವೇ ಬರಗಾಲ, ಬಿಜಾಪೂರ ಜಿಲ್ಲೆಯ, ಹುನಗುಂದ ತಾಲೂಕಿನ ಅನೇಕ ಗ್ರಾಮಗಳು ಬರಗಾಲಕ್ಕೆ ತುತ್ತಾದ ಸಂದರ್ಭದಲ್ಲಿ “ಹೂವನೂರು” (ಹೂನೂರು) ಎಂಬ ಪುಟ್ಟಹಳ್ಳಿಯಲ್ಲಿನ ಜನತೆ ಗುಳೆ ಬಂದವರ ಬದುಕಿನ ನೈಜ ಕಥನ. 1925 ರಲ್ಲಿ ತಲೆದೋರಿದ ಭೀಕರ “ಡವಗಿ” ಬರಗಾಲದಲ್ಲಿ ಹಸಿವಿನಿಂದ ತತ್ತರಿಸಿದ ಮನುಷ್ಯರು, ಪ್ರಾಣಿಸಂಕುಲಗಳು ಅನ್ನ-ನೀರು ಇಲ್ಲದೇ ಡವಗಿ ಹಣ್ಣುಗಳನ್ನು ತಿಂದು ಬದುಕಿದರು. ಹೊಟ್ಟೆ ಹೊರೆಯಲು ದುಡಿಮೆಗಾಗಿ ಅನೇಕ ಪಟ್ಟಣಗಳಿಗೆ ಗುಳೆ ಹೋದವರಲ್ಲಿ, ಹುಬ್ಬಳ್ಳಿ ಪಟ್ಟಣಕ್ಕೆ ಬಂದಂತ ಶಿವನಪ್ಪ ಹೂನೂರು ಮತ್ತು ಬಸಮ್ಮ ದಂಪತಿ ಹಾಗೂ ಪರಿವಾರದವರು.  ಇವರು ಗಿರಣಿಚಾಳದಲ್ಲಿ ಒಂದು ಸಣ್ಣ ಜೋಪಡಿಯಲ್ಲಿ ನೆಲೆಸಿ, ಆಗಿನ ಮಹಾದೇವ ಜವಳಿ ಗಿರಣಿ (ಭಾರತ ಮಿಲ್ಲ), ಸುಂದತ್ತಾ ಪ್ಯಾಕ್ಟರಿಯಲ್ಲಿ ದುಡಿದು ಬದುಕು ಕಟ್ಟಿಕೊಳ್ಳಲು ನೆಲೆನಿಂತವರು. ಶಿವನಪ್ಪ ಮತ್ತು ಬಸಮ್ಮ ದಂಪತಿಗಳು ಧಾರ್ಮಿಕತೆಯಲ್ಲಿ ಅಪಾರ ನಂಬಿಕೆವುಳ್ಳವರು. ಅಂತೆಯೇ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ ಭಕ್ತಿ ಪ್ರವಚನ ಆಲಿಸಲು ಶ್ರೀಗಳ ಮಠಕ್ಕೆ ನಿತ್ಯವೂ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಸ್ವತ: ಶ್ರೀ ಸಿದ್ಧಾರೂಢ ಸ್ವಾಮಿಗಳು ಕೈಲಾಸ ಮಂಟಪದ ಕಾಮಗಾರಿಯನ್ನು ಪ್ರಾರಂಭಿಸಿದ್ದರು.  ಅದರಲ್ಲೂ ಕೂಡ ಇವರು ಭಾಗಿಯಾಗಿ ತಮ್ಮ ಅಳಿಲುಸೇವೆಯನ್ನು ಮಾಡುತ್ತಿದ್ದರು.  ಅಂಥಹ ಬಡತನದಲ್ಲೂ ಕೂಡ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡುವಲ್ಲಿ ಶಿವನಪ್ಪ ಮತ್ತು ಬಸಮ್ಮ ದಂಪತಿಗಳಿಗೆ ಶ್ರೀ ಸಿದ್ಧಾರೂಢರು ಸಿರಿತನ ಕರುಣಿಸಿದ್ದರು ಎಂದರೆ ಅತಿಶಯೋಕ್ತಿ ಆಗಲಾರದು. ಒಟ್ಟಾರೆ ಇವರು ಶ್ರೀ ಸಿದ್ಧಾರೂಢ ಸ್ವಾಮಿಗಳ ಅದ್ವೈತ ಬೋಧನೆಯ ಪ್ರವಚನ ಜೀವನದಲ್ಲಿ ಅಳವಡಿಸಿಕೊಂಡಿದ್ದರು. 
ಶಿವನಪ್ಪ ಮತ್ತು ಬಸಮ್ಮ ದಂಪತಿಯವರ ಉದರದಲ್ಲಿ ನಾಲ್ಕನೇಯ ಮಗುವಾಗಿ “ಸಿದ್ದಪ್ಪ” ದಿನಾಂಕ : 04-10-1936 ರಂದು ಜನಿಸಿದರು. ಈ ದಂಪತಿಗಳು ಬಡತನದಲ್ಲಿದ್ದರೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ತುಂಬಾ ಶ್ರಮಿಸಿದರು.  ಅಂದಿನ ಕಾಲದಲ್ಲಿ ವಿದ್ಯೆ ಎಲ್ಲರಿಗೂ ಸಿಗುತ್ತಿರಲಿಲ್ಲ. ಸವರ್ಣಿಯರಿಗೆ ಮಾತ್ರ ದೊರಕುತ್ತಿತ್ತು. ಅವರ್ಣೀಯರಿಗೆ ಯಾವುದೇ ರೀತಿಯ ಅವಕಾಶಗಳು ಇರಲಿಲ್ಲ.  ಇಂತಹ ಪರಿಸ್ಥಿತಿಯಲ್ಲೂ ಕೂಡ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ, ಶಿವನಪ್ಪ ಮತ್ತು ಬಸಮ್ಮ ದಂಪತಿಗಳು ಇಂದಿನ ಶೋಷಿತ ವರ್ಗದ ಸಮಾಜಕ್ಕೆ ಮಾದರಿಯಾಗುತ್ತಾರೆ.

 

ಎಸ್.ಎಸ್.ವಿದ್ವಾನ್ - ಬಾಲ್ಯ ಜೀವನ ಮತ್ತು ಶಿಕ್ಷಣ

ಬಹಳ ಚುರುಕು ಮತ್ತು ಸೂಕ್ಷ್ಮಮತಿಯಾದ “ಸಿದ್ದಪ್ಪ” ಅವರ ಎಳೆಯ ಹೃದಯದಲ್ಲಿ, ತಂದೆ-ತಾಯಿಗಳಾದ ಶಿವನಪ್ಪ ಮತ್ತು ಬಸಮ್ಮ ಅವರಲ್ಲಿದ್ದ ಪರೋಪಕಾರ ಗುಣ, ಧಾರ್ಮಿಕತೆ, ಸತ್ಯನಿಷ್ಠೆಗಳು ರಕ್ತಗತವಾಗಿ ಬಂದವು.  1941-42 ರಲ್ಲಿ “ಸಿದ್ದಪ್ಪ” ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಹಾದೇವ ಜವಳಿ ಗಿರಣಿಯ ಆಟದ (ಸಾಲಿ) ಮೈದಾನದಲ್ಲಿರುವ, ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಮುಂದೆ ಬಾಸೆಲ್ ಮಿಶನ್ ಪ್ರೈಮರಿ ಶಾಲೆಗೆ ಪ್ರವೇಶಿಸಿದರು. ಹಾಯ್‍ಸ್ಕೂಲ್ ಶಿಕ್ಷಣವನ್ನು ನಗರದ ಲ್ಯಾಮಿಂಗ್ಟನ್ ಪ್ರೌಢ ಶಾಲೆಯಲ್ಲಿ ಮುಗಿಸಿದರು. ನಂತರ, ಉತ್ತರ ಕರ್ನಾಟಕದ ಪ್ರಖ್ಯಾತಿಯ ಧಾರವಾಡದ ಕರ್ನಾಟಕ ಕಾಲೇಜನಲ್ಲಿ ಇಂಟರ್ನ್ ಶಿಕ್ಷಣ ಹಾಗೂ ಪದವಿ ಶಿಕ್ಷಣ ಗಳಿಸಿದರು. 1970 ರಲ್ಲಿ ಉಪನೋಂದಣಿ ಅಧಿಕಾರಿಯಾಗಿ ಸರ್ಕಾರಿ ಸೇವೆಗೆ ಸೇರಿದರು. ಮುಂದೆ ಸರ್ಕಾರಿ ಸೇವೆಯೊಂದಿಗೆ, ತಮ್ಮ ಅಭಿರುಚಿಯಾದ, ಸಾಹಿತ್ಯ, ಸಂಗೀತ, ಕಥೆ-ಕಾದಂಬರಿ ರಚನೆ, ಇತ್ಯಾದಿ ಜೊತೆಗೆ ಸಾಹಿತ್ಯದ ಕೃಷಿಯಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡರು. 

 

ಎಸ್.ಎಸ್. ವಿದ್ವಾನ್ ಮತ್ತು ಕನ್ನಡ ಸಾಹಿತ್ಯ

ಸರ್ಕಾರಿ ಉನ್ನತ ಹುದ್ದೆಯಲ್ಲಿ ಉಪನೋಂದಣಿ ಅಧಿಕಾರಿಗಳಾಗಿ, ತಮ್ಮ ಬಿಡುವಿಲ್ಲದ ಒತ್ತಡದ ಕೆಲಸದ ಮಧ್ಯೆಯೂ ಕೂಡ, ಕಲೆ, ಸಾಹಿತ್ಯ, ಸಂಗೀತ, ಕಥೆ, ಕಾದಂಬರಿ, ನಾಟಕ, ಕಾವ್ಯ, ಚಲನಚಿತ್ರ..ಕಥೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅನೇಕ ಕಥೆ-ಕಾದಂಬರಿ, ಕಾವ್ಯ-ನಾಟಕ ರಚಿಸಿದ್ದಾರೆ. ಎಸ್.ಎಸ್.ವಿದ್ವಾನ್‍ರವರು, ಕನ್ನಡ ಸಾಹಿತ್ಯದ ಸಾರಸ್ವತ ಲೋಕದಲ್ಲಿ “ನಂದೀನಂದನ” ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾಗಿದ್ದಾರೆ. ಇವರು ರಚಿಸಿ, ಪ್ರಕಟಿಸಿದ ಕೃತಿಗಳಲ್ಲಿ “ಕಾವ್ಯಶ್ರೀ” (ಕವನ-ಸಂಕಲನ) “ಕಾವೇರಿ” (ಕಿರು ಕಾದಂಬರಿ), ಶ್ರೀಯುತರು, ಧಾರ್ಮಿಕ ಅಧ್ಯಾತ್ಮಿಕತೆಯಲ್ಲಿ ಅಪಾರ ನಂಬಿಗೆವುಳ್ಳವರಾಗಿದ್ದರು.  ಅಂತೆಯೇ ಅವರ “ಪಂಚೀಕರಣ” (ಅಧ್ಯಾತ್ಮಿಕ ಕವನಗಳು), ಕವನ ಸಂಕಲನ ಮತ್ತು ನಾಟಕಗಳ ಬಗ್ಗೆ ಇವರಿಗಿದ್ದ ನಟನೆಯ ಗೀಳು ಎಷ್ಟಿತ್ತು ಎಂಬುದಕ್ಕೆ ಇವರು ರಚಿಸಿದ ನಾಟಕಗಳಲ್ಲಿ 1962 ನೇ ಇಸವಿಯಲ್ಲಿ ರಚಿಸಿದ ನಾಟಕ “ಸಾನಂದ ಗಣೇಶ್ವರ” ‘ರೂಪಾಂತರ' ಹಾಗೂ ಅಮರ ತೀರ್ಪು’ ಸನ್ 1957 ಮತ್ತು 1959 ರಲ್ಲಿ ಬರೆದು ಅಭಿನಯಿಸಿದ ಕೃತಿಗಳು.  ಇಂದಿನ ಕನ್ನಡ ನಾಟಕಕಾರರ ಅಗ್ರ ಪಂಕ್ತಿಯಲ್ಲಿ ಮೆಚ್ಚುಗೆಯ ಸ್ಥಾನವನ್ನು ನಂದೀನಂದನರು ದೊರಕಿಸಿಕೊಂಡಿದ್ದಾರೆ.  ಸುಮಾರು 35-40 ವರ್ಷಗಳ ಹಿಂದೆಯೇ ಇವರ ನಾಟಕಗಳು ಧಾರವಾಡ ಆಕಾಶವಾಣಿಯಲ್ಲಿ ಪ್ರಸಾರಗೊಂಡಿವೆ. ಸಾಹಿತ್ಯದ ಎಲ್ಲಾ ಕ್ಷೇತ್ರದಲ್ಲೂ ಅನೇಕ ಕೃತಿಗಳನ್ನು ಕಲೆ, ಸಾಹಿತ್ಯದ ಅಭಿಮಾನಿಗಳಿಗೆ ನೀಡಿದ್ದಾರೆ. ಕಥೆ-ಕಾದಂಬರಿ, ಕಾವ್ಯ-ನಾಟಕ ವಿಮರ್ಶೆ ಹೀಗೆ ಇತರ ಕೃತಿಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಕೊಂಡಿವೆ. ಇವರ ಸಣ್ಣಕಥೆ “ಸಂಚಾರಿ” ಯು ಕನ್ನಡ ಚಲನಚಿತ್ರವಾಗಿದೆ, ಈ ಕಥೆಗೆ 1981 ನೇ ಸಾಲಿನ ಉತ್ತಮ ಕಥೆಯೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಬೆಂಗಳೂರು, ರಾಜ್ಯದ ಅತ್ಯುತ್ತಮ ಚಿತ್ರಕಥೆಯೆಂದು ಪ್ರಥಮ ಪ್ರಶಸ್ತಿ ದೊರಕಿದೆ. 

 

ಎಸ್.ಎಸ್.ವಿದ್ವಾನ್ ಮತ್ತು ಸಮಾಜ ಸೇವೆ

ಎಸ್.ಎಸ್. ವಿದ್ವ್ವಾನ್ ಅವರು ಜಿಲ್ಲಾ ನೋಂದಣಿ ಅಧಿಕಾರಿಗಳಾಗಿ, ತಮ್ಮ ಸಾಹಿತ್ಯದ ಹವ್ಯಾಸದೊಂದಿಗೆ ಇತರೆ ಎಲ್ಲಾ ವಿಭಾಗಗಳಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯವಾಗದ ಮಾತು. ಆದರೆ ಇದಕೆಲ್ಲ ಅಪವಾದವೆಂಬಂತೆ ವಿದ್ವಾನ್‍ರವರು ಎಲ್ಲಾ ತಮ್ಮ ಅಭಿರುಚಿಯ ಕ್ಷೇತ್ರಗಳಲ್ಲಿ ಸಾಹಿತ್ಯ, ಕಥೆ, ಕಾದಂಬರಿ, ಕಾವ್ಯ, ನಾಟಕ ಹೀಗೆ ಅಧ್ಯಯನಶೀಲರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಸಮಾಜಮುಖಿಯಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಅದಕ್ಕೆ ಅವರು ಜಿಲ್ಲಾ ನೋಂದಣಿ ಅಧಿಕಾರಿಗಳಾಗಿದ್ದ ಸಂದರ್ಭದಲ್ಲಿ, ಪ್ರತಿ ರವಿವಾರ ರಜೆ ಇದ್ದರೂ ಕೂಡ ವಿದ್ವಾನ್ ಅವರು ಸಮಾಜ ಸೇವೆ ಕೆಲಸದಲ್ಲಿ ನಿರತರಾಗುತ್ತಿದ್ದರು.  ಅಖಂಡ-ಧಾರವಾಡ ಜಿಲ್ಲೆಯ ಅನೇಕ ತಾಲೂಕ ಮತ್ತು ಹೋಬಳಿ ಗ್ರಾಮಗಳಲ್ಲಿ ಪರಿಶಿಷ್ಟ ಯುವಕರನ್ನು ಸಂಘಟಿಸಿ, ಅವರಿಗೆ “ಬಾಬಾಸಾಹೇಬ ಅಂಬೇಡ್ಕರ” ಹೆಸರಲ್ಲಿ ಅನೇಕ ಸಂಘ-ಸಂಸ್ಥೆಗಳನ್ನು ರಚಿಸಿಕೊಟ್ಟು, ಜನಸೇವೆಯಲ್ಲಿ ತೊಡಗಲು ಕಾರಣೀಭೂತರಾಗುತ್ತಾರೆ.  ಇದಕ್ಕೆ ಉತ್ತಮ ನಿದರ್ಶನ, ಗಿರಣಿಚಾಳದಲ್ಲಿ 1980-81 ರಲ್ಲಿ  “ಶ್ರೀ ಚನ್ನಬಸವೇಶ್ವರ ಸೇವಾ ಸಂಘ” ಸ್ಥಾಪಿಸಿಕೊಟ್ಟು, ಮಹಿಳೆಯರಿಗಾಗಿ, “ರಮಾಬಾಯಿ ಅಂಬೇಡ್ಕರ ಹೊಲಿಗೆ ತರಬೇತಿ ಕೇಂದ್ರ ಸ್ಥಾಪಿಸಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಪರಿಶಿಷ್ಟ ಜಾತಿ-ಪಂಗಡಗಳ ಕಲ್ಯಾಣಕ್ಕೆ ಮೀಸಲಿರಿಸಿದ ಶೇ. 18% ಹಣದಲ್ಲಿ ಹೊಲಿಗೆ ಯಂತ್ರಗಳು, ಯುವಕರಿಗೆ ಕ್ರೀಡಾ ಸಾಮಾಗ್ರಿಗಳು ದೊರಕಿಸಿಕೊಟ್ಟವರು.  ಅಲ್ಲದೇ ತಮ್ಮ ಸಂಚಾರಿ ಚಲನಚಿತ್ರದಲ್ಲಿ ಕೂಡ ತಮ್ಮ ಸಂಗೀತದ ಅಭಿರುಚಿಯನ್ನು “ಶ್ರೀ ಚನ್ನಬಸವೇಶ್ವರ ಭಜನಾ ಮಂಡಳಿ” ಯವರ ಯುವಕರಿಂದ ಭಜನಾ ಹಾಡುಗಳನ್ನು ಹಾಡಿಸುವ ಮೂಲಕ ಚಿತ್ರೀಕರಣವನ್ನು ಮಾಡಿದ್ದು, ಇವರ ಸಂಗೀತದ ಮೇಲಿನ ಅಪಾರವಾದ ಪ್ರೇಮ ಮತ್ತು ಅಭಿಮಾನದ ಸಂಗತಿಯೆನ್ನಬಹುದು. 

ಒಬ್ಬ ಕ್ರೀಯಾಶೀಲ ವ್ಯಕ್ತಿಯು ತನ್ನ ಸಾಧನೆಯಿಂದ ನಾಡಿನ ಮತ್ತು ಸಮಾಜದ ಆಸ್ತಿಯಾಗುತ್ತಾನೆ ಎಂಬುದಕ್ಕೆ ವಿದ್ವಾನರವರು ಸಾಕ್ಷಿಯಾಗುತ್ತಾರೆ. ಇವರ ಮುದ್ದಿನ ಚಿರಂಜೀವಿಯಾದ ಶ್ರೀ ಎಸ್.ಗುರುಕುಮಾರ ಅವರು ಬಿ.ಇ.(ಸಿವ್ಹಿಲ್) ಇಂಜನೀಯರ ಪದವಿ ಪಡೆದವರು. ಇನ್ನೊರ್ವ ಪುತ್ರ ಡಾ: ಎಸ್.ವಿಶ್ವನಾಥ, ರೇಡಿಯಾಲೊಜಿಸ್ಟ ವೈದ್ಯರಾಗಿ  ಯುನೈಟೆಡ್ ಕಿಂಗಡಮ್ ದೇಶ (ಲಂಡನ) ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ತೃತೀಯ ಪುತ್ರ ರವೀಂದ್ರನಾಥ ತಾಯಿ ಶ್ರೀಮತಿ ಯಶೋಧಾದೇವಿ ವಿದ್ವಾನ ಹಾಗೂ ತಮ್ಮ ಕುಟುಂಬದೊಂದಿಗೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. 

ದುರದೃಷ್ಠವಶಾತ್ ನಾವೊಂದು ಬಗೆದರೆ ದೈವವೊಂದು ಬಗೆಯುವುದು, ಎಂಬಂತೆ ದಿನಾಂಕ : 03-09-1988 ನೇ ಇಸವಿಯ ಶ್ರಾವಣಮಾಸದಲ್ಲಿ ಕುಟುಂಬದ ಎಲ್ಲರ ಮೆಚ್ಚಿನ, ಮುದ್ದಿನ ಹಿರಿಯ ಸುಪುತ್ರ ಗುರುಕುಮಾರ ಕೇವಲ 23ನೇ ವಯಸ್ಸಿದಾಗ ಅಕಾಲಿಕವಾಗಿ ವಿಧಿವಶರಾಗುತ್ತಾರೆ. ಮಗನ ಅಗಲಿಕೆಯ ನೋವನ್ನು ಮರೆಯಲು ಗುರುಕುಮಾರ ಸ್ಮರಣಾರ್ಥವಾಗಿ ತಮ್ಮದೇ ಆದಂತ ಒಂದು ಸಾಮಾಜಿಕ, ಶೈಕ್ಷಣಿಕವಾದ  “ಎಸ್.ಗುರುಕುಮಾರ ಮೆಮೋರಿಯಲ್ ಟ್ರಸ್ಟ” ರಚನೆ ಮಾಡಿ, 1991-92 ರಲ್ಲಿ ಗುರುಕುಮಾರ ಪ್ರಾಥಮಿಕ ಶಾಲೆಯನ್ನು ಕೂಡ ಸರ್ಕಾರದ ಅನುಮತಿಯೊಂದಿಗೆ ಆರಂಭಿಸುತ್ತಾರೆ. 

ಕೆಲವು ಕಾಲಾನಂತರ, ಅನಿವಾರ್ಯ ಕಾರಣಗಳಿಂದಾಗಿ ಶಾಲೆಯು ನಿಂತು ಹೋಗುತ್ತದೆ. ಮುಂದೆ ನಿವೃತ್ತಿಯ ನಂತರವೂ ಕೂಡ ಸಾಹಿತ್ಯ ಕ್ಷೇತ್ರಗಳಲ್ಲಿ ಕಾರ್ಯ ತತ್ಪರರಾಗಿರುತ್ತಾರೆ. ಇವರ ಸುಪುತ್ರ ಡಾ: ವಿಶ್ವನಾಥ ಸಿದ್ದಪ್ಪ ಅವರು ಲಂಡನ್ ನಗರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ತಮ್ಮ ತಂದೆಯವರಿಗೆ ಸಾಹಿತ್ಯ, ಸಂಗೀತ, ನಾಟಕಗಳಲ್ಲಿ ಇರುವ ಅಭಿರುಚಿ ಮನಗಂಡು ಅವರನ್ನು ಲಂಡನ ಮತ್ತು ಯುರೋಪ ದೇಶಗಳ ಪ್ರವಾಸಕ್ಕೆ 2006 ರಲ್ಲಿ ಹಾಗೂ 2012 ರಲ್ಲಿ ಕರೆದೊಯ್ಯುತ್ತಾರೆ.  ಇತ್ತೀಚೆಗೆ ವಯೋ ಸಹಜ ಕಾಯಿಲೆಯಿಂದ, ಆಗಸ್ಟ-27, 2016 ರಂದು ವಿಧಿವಶರಾಗುತ್ತಾರೆ.  ಅದಕ್ಕೆ ಹೇಳುವುದು “ಕಾಕತಾಳೀಯ” ಅಂತ ಏಕೆಂದರೆ, ಇವರ ತಂದೆ-ತಾಯಿಗಳು ಶ್ರೀ ಸಿದ್ಧ್ದಾರೂಢ ಸ್ವಾಮಿಗಳ ಪರಮಭಕ್ತರು ಅವರಂತೆಯೇ ಶ್ರೀ ವಿದ್ವಾನ್ ಅವರಿಗೆ “ಸಿದ್ದಪ್ಪ” ಅಂತ ಹೆಸರಿಟ್ಟಿದ್ದರು.  ಇವರು ಕೂಡ ಶ್ರೀ ಸಿದ್ಧಾರೂಢರ ಭಕ್ತರು. ಇವರ ಮುದ್ದಿನ ಮಗ ಗುರುಕುಮಾರ ಕೂಡ ತೀರಿ ಹೋಗಿದ್ದು, ಶ್ರಾವಣಮಾಸದ ತಿಂಗಳಲ್ಲಿಯೇ, ವಿದ್ವಾನರವರು ಕೂಡ ವಿಧಿವಶರಾದದ್ದು, ಶ್ರಾವಣ ಮಾಸದಲ್ಲಿಯೇ ಇದಕ್ಕೆ ಕಾಕತಾಳೀಯ ಎನ್ನುವುದು. ಒಬ್ಬ ವ್ಯಕ್ತಿ ಸಮಾಜದಲ್ಲಿ, ತನ್ನ ಸಾಧನೆಯಿಂದ ಉಸಿರು ನಿಂತು ಹೋದರೂ ಹೆಸರಾಗಿ ಉಳಿಯುತ್ತಾರೆ ಎಂಬುದಕ್ಕೆ ನಮ್ಮ ಮುಂದೆ ಎಸ್.ಎಸ್.ವಿದ್ವಾನ್ ಅವರು, ಕನ್ನಡನಾಡಿನ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಅಜರಾಮರರಾಗಿ ನಿಲ್ಲುತ್ತಾರೆ.  ಇವರು ಬಿಟ್ಟು ಹೋದ ಸರಳತೆ, ದಕ್ಷತೆ, ಸೌಜನ್ಯ, ವೈಚಾರಿಕತೆ ಹಾಗೂ ವಿಶಾಲ ಮನೋಭಾವಗಳು ಇಂದಿನ ನಮ್ಮ ಪೀಳಿಗೆಗೆ ಆದರ್ಶಗಳಾಗಬೇಕು. 

 

ಕವಿ, ಸಾಹಿತಿ, ಸಂಗೀತ, ನಾಟಕಕಾರ ಎಸ್.ಎಸ್.ವಿದ್ವಾನ್ - ಅವರ ಒಂದು ವಿದೇಶ ಯಾತ್ರೆ

ನಮ್ಮ ಕರ್ನಾಟಕವು ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪಕಲೆ, ಲಲಿತಕಲೆ, ಜಾನಪದ, ಐತಿಹಾಸಿಕ ಸಂಸ್ಕøತಿಯಿಂದ ಶ್ರೀಮಂತವಾಗಿದೆ.  ಇದು ವೀರ-ಶೂರರ ನಾಡು, ಕವಿ ಸಂತರ ಪುಣ್ಯದ ಬೀಡು. ಕನ್ನಡನಾಡಿನಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ್ತ ತಮ್ಮನ್ನು ತೊಡಗಿಸಿಕೊಂಡವರು ಸಾವಿರಾರು.  ಅಂಥವರಲ್ಲಿಯೇ ನಮ್ಮ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದಲ್ಲಿ ಎಲೆಮರೆಯ ಕಾಯಿಯಂತೆ ಸಾಹಿತ್ಯ, ನಾಟಕ, ಸಂಗೀತ, ಕಥೆ, ಕಾದಂಬರಿಕಾರ ಎಸ್.ಎಸ್.ವಿದ್ವಾನ್  ಕನ್ನಡ ಸಾರಸ್ವತ ಲೋಕದಲ್ಲಿ “ನಂದೀನಂದನ” ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದಾರೆ. 
 
ಇವರ ಕಾವ್ಯನಾಮದ ಒಳಅರ್ಥವೂ (ಬಸಮ್ಮನ ಪುತ್ರ; ಬಸಮ್ಮ=ನಂದಿ; ಪುತ್ರ=ನಂದನ) ತಾಯಿ-ಮಗನ ಮಧುರವಾದ ವಾತ್ಸಲ್ಯ, ತಮ್ಮ ತಾಯಿಯ ಬಗ್ಗೆ ಇದ್ದ, ಭಕ್ತಿ ಗೌರವದ ಪ್ರತೀಕವಾಗಿದೆ. ಇವರು ರಚಿಸಿ, ಪ್ರಕಟಿಸಿದ ಅನೇಕ ಕೃತಿಗಳು, ಕಥೆ-ಕಾದಂಬರಿ, ನಾಟಕಗಳು ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಪ್ರಸಾರಗೊಂಡಿವೆ.  
 
ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ತಮ್ಮ ಗುರುತರ ಸೇವೆಯನ್ನು ಗೈದಿರುವ ಎಸ್.ಎಸ್.ವಿದ್ವಾನ್ ಅವರಿಗೆ ತಮ್ಮ ನಿವೃತ್ತಿಯ ನಂತರದ ದಿನಗಳಲ್ಲಿ ವಿದೇಶಕ್ಕೆ ಹೋಗುವ ಅವಕಾಶ ಒದಗಿ ಬಂದದ್ದು, ಅದು ಸರ್ಕಾರದ ಅಥವಾ ಇತರೆ ಸಾಹಿತ್ಯ ಕ್ಷೇತ್ರಗಳ ಸಂಸ್ಥೆಗಳಿಂದ ಅಲ್ಲ, ಅವರ ಸುಪುತ್ರ ಡಾ: ವಿಶ್ವನಾಥ ಸಿದ್ದಪ್ಪ ಅವರು ಲಂಡನ್ ನಗರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ತಮ್ಮ ತಂದೆಯವರಿಗೆ ಸಾಹಿತ್ಯ, ಕಾವ್ಯ, ನಾಟಕ, ಸಂಗೀತಗಳಲ್ಲಿ ಇರುವ ಅಭಿರುಚಿ, ಮಾಗದ ಅವರ ಸಾಹಿತ್ಯದ ಉತ್ಸಾಹ ಹುಮ್ಮಸ್ಸು ಅವರನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಕರೆದೊಯ್ಯುವ ಸದಾವಕಾಶ ಒದಗಿ ಬಂದದ್ದು ಕೂಡಾ ಸಾಹಿತ್ಯಕ್ಕೆ ಸ್ಪೂರ್ತಿಯ ಸೆಲೆ ಎನ್ನಬಹುದು, ಜಗತ್ತಿನಾದ್ಯಂತ ಪ್ರಸಿದ್ಧಿಯನ್ನು ಪಡೆದಿರುವ ಕವಿ, ನಾಟಕಕಾರ ವೀಲಿಯಮ್ ಶೇಕ್ಸಪಿಯರ್ ಜನಿಸಿದ ಪುಣ್ಯ ಸ್ಥಳದಲ್ಲಿ ಹೆಜ್ಜೆಯ ಗುರುತು ಇರಿಸಿದ ಕನ್ನಡ ನಾಡಿನ ಇನ್ನೊರ್ವ ಕವಿ, ನಾಟಕಕಾರ ಎಸ್.ಎಸ್.ವಿದ್ವಾನ್‍ರವರ ಸಾಹಿತ್ಯದ ಪಯಣ ಎನ್ನಬಹುದು. 
 
ಎಸ್.ಎಸ್.ವಿದ್ವಾನ್‍ರವರು ತಮ್ಮ ಪತ್ನಿ ಶ್ರೀಮತಿ ಯಶೋಧಾದೇವಿ ವಿದ್ವಾನ್, ಪುತ್ರ, ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ವೀಕ್ಷಣೆ ಮಾಡಿದ ಅನೇಕ ಪ್ರವಾಸಿ ತಾಣಗಳು, ಲಂಡನ್ ನಗರದ ವಿಜ್ಞಾನ ಸಂಗ್ರಹಾಲಯ, ಲಂಡನ ಬ್ರಿಡ್ಜ್, ಟಾವರ್ ಬ್ರಿಡ್ಜ್ ಅರಮನೆ ಹಾಗೂ ಪ್ರಸಿದ್ಧ ಕೋಹಿನೂರ ಡೈಮಂಡ್, ರಾಣಿ ಎಲಿಜಾಬೆತ್ ರವರ ಬಕಿಂಗಹ್ಯಾಮ್ ಅರಮನೆ, ಭಾರತೀಯ ಹಿಂದೂ ದೇವಾಲಯಗಳಾದ ಮಹಾಲಕ್ಷ್ಮೀ ದೇವಾಲಯ, ಬಾಲಾಜಿ ದೇವಾಲಯ, ಸ್ವಾಮಿ ನಾರಾಯಣ ದೇವಾಲಯ, ಹರೇಕೃಷ್ಣ (ಇಸ್ಕಾನ) ದೇವಾಲಯ.  ಭಾರತೀಯ ವಿದ್ಯಾ ಭವನ ಸಂಗೀತ ಪಾಠಶಾಲೆ, ಲಂಡನ ನ್ಯಾಷನಲ್ ಆರ್ಟ ಗ್ಯಾಲರಿ, ನ್ಯಾಷನಲ್ ಇತಿಹಾಸ ಸಂಗ್ರಹಾಲಯ ಅಲ್ಲದೇ ಜರ್ಮನಿ, ಇಟಲಿ, ರೋಮ್, ಪ್ರಾನ್ಸ್, ಪ್ಯಾರೀಸ್‍ನಲ್ಲಿರುವ ಪ್ರಪಂಚದ ಅತೀ ದೊಡ್ಡ ಚಿತ್ರಕಲೆ ಸಂಗ್ರಹಾಲಯ-“ಲೂವ್ರ್ ಮ್ಯೂಸಿಯಂ” (ಮೋನಾಲಿಸಾ ಪೇಂಟಿಂಗ್ ಇರುವ ಸ್ಥಳ) ಪೋಪ್ ನಗರಿ, ವ್ಯಾಟಿಕನ್ ಸಿಟಿ ಇತ್ಯಾದಿ ದೇಶಗಳ ಐತಿಹಾಸಿಕವಾದ ಪ್ರವಾಸಿ ತಾಣಗಳು ಒಬ್ಬ ಕವಿ ಸಾಹಿತಿಗಳಲ್ಲಿ ಕಣ್ತುಂಬುವ ಸ್ವಾರಸ್ಯಕರವೇ ಬೇರೆ, ಅದು ವಿದೇಶ ಪ್ರವಾಸದ ಕಥನ ರೂಪಕದಲ್ಲಿ ರಚನೆಯಾಗಿದ್ದರೆ ಒಂದು ಮೈಲಿಗಲ್ಲು ಆಗಬಹುದಿತ್ತು. ಆದರೆ ವಿದ್ವಾನ್‍ರವರ ಸುಪ್ತವಾದ ಮನಸ್ಸು ಭಾವನಾತೀತವಾದ ಕಲ್ಪನಾ ಹೃದಯಕ್ಕೆ ವಯಸ್ಸಾಗದಿದ್ದರೂ ಅವರ ದೇಹಕ್ಕೆ ವಯಸ್ಸಾಗಿತ್ತು ಹೀಗಾಗಿ ವಿದ್ವಾನ್‍ರವರ ವಿದೇಶ ಪ್ರವಾಸ. ಕಂಗಳು ಕಂಡ ವಿಶ್ವದ ಐತಿಹಾಸಿಕ ಅದ್ಭುತ ತಾಣಗಳು ಅವರ ಕೈ ಬರಹದಲ್ಲಿ ಅರಳಿದ್ದರೆ ಒಂದು ಸಾಹಿತ್ಯದ ಕೃತಿಯೇ ರಚನೆಯಾಗುತಿತ್ತು.  ಅಂಥ ಒಂದು ಸದಾವಕಾಶ ನಮ್ಮ ಸಾಹಿತ್ಯ ಕ್ಷೇತ್ರವು ಕಳೆದುಕೊಂಡಂತಾಯಿತು. 
 
-ಕೃಷ್ಣಾ ಜಕ್ಕಪ್ಪನವರ