• Pupils   |
  • Parents   |
  • Comunity

ಗುರುಕುಮಾರ ಮೆಮೋರಿಯಲ್ ಟ್ರಸ್ಟ ಸ್ಥಾಪನೆ-ಹಿನ್ನೆಲೆ

ನಾಡಿನ ತುಂಬೆಲ್ಲಾ ಶತಮಾನಗಳಿಂದ ಬಡತನ-ಅಸಮಾನತೆ, ಅನಕ್ಷರತೆ-ಅವಮಾನ, ಸಾಮಾಜಿಕ ಸ್ಥಾನಮಾನಗಳಲ್ಲಿ ಏರುಪೇರು, ಕನಿಷ್ಠ ಮೂಲಭೂತ ಸೌಲಭ್ಯಗಳಿಂದ ವಂಚಿತ ಸಮುದಾಯಗಳು, ಇಂದಿಗೂ ತುತ್ತು ಅನ್ನಕ್ಕಾಗಿ ಪರಿತಪಿಸುವಂತ ಪರಿಸ್ಥಿತಿ ಇನ್ನೂ ಜೀವಂತ ಇರುವುದು ಕಾಣುತ್ತೇವೆ.  ಇಂತಹ ಕೊರತೆಗಳನ್ನು ನೀಗಿಸಲು ನಮ್ಮ ನಾಡಿನಲ್ಲಿ ಮಠ-ಮಂದಿರಗಳು, ಚರ್ಚ-ಮಸೀದಿಗಳು, ಸಾಧು-ಸಂತರು, ಸಾವಿರಾರು ಸ್ವಯಂಸೇವಾ ಸಂಸ್ಥೆಗಳು, ಸಾಮಾಜಿಕ ಬದ್ಧತೆವುಳ್ಳ ವ್ಯಕ್ತಿಗಳು, ಇಂದು ಕೂಡ ಸೇವಾ ಮನೋಭಾವದಿಂದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ.  ಇನ್ನೂ ಕೆಲವರು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮ ಕೈಲಾದ ಅಳಿಲು ಸೇವೆಯನ್ನು ಮಾಡುತ್ತ ಸಾಗಿದ್ದಾರೆ. 

“ಸೇವೆ” ಉಪಕಾರವಲ್ಲ-ಅದು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಕರ್ತವ್ಯ ಮತ್ತು ಜವಾಬ್ದಾರಿ ಕೂಡ ಆಗಿದೆ ಎಂಬ ಮಾತುಗಳಿಗೆ ಕೃತಿಯಾಗಲು ಹೊರಟವರು ಸಾಹಿತಿ, ಕವಿ, ನಾಟಕ, ಕಥೆ ಕಾದಂಬರಿ, ಚಿತ್ರ ಸಾಹಿತಿ, ಹಿರಿಯ ಜಿಲ್ಲಾ ನೋಂದಣಿ ಅಧಿಕಾರಿಗಳಾಗಿದ್ದ ಶ್ರೀ ಎಸ್.ಎಸ್.ವಿದ್ವಾನ್ ಇವರ ಅಪಾರ ಪ್ರೀತಿಯ ಮುದ್ದು ಸುಕುಮಾರ “ಗುರುಕುಮಾರ” ನ ಅಕಾಲಿಕ ಅಗಲಿಕೆಯಿಂದ ನರಳದೇ ಮತ್ತೊಂದಿಷ್ಟು ಶಿಕ್ಷಣ ವಂಚಿತ ಜೀವಗಳಿಗೆ ಬೆಳಕು ನೀಡಿ, ಜ್ಞಾನಧಾರೆ ಒದಗಿಸುವ ಅಧಮ್ಯ ಗುರಿಯೊಂದಿಗೆ 1989-1990 ನೇ ಸಾಲಿನಲ್ಲಿ ತಮ್ಮದೇ ಆದಂತ, “ಗುರುಕುಮಾರ” ನ ಹೆಸರು ಮತ್ತು ನೆನಪು ಚಿರಾಯುಗೊಳಿಸುವ ನಿಟ್ಟಿನಲ್ಲಿ “ಗುರುಕುಮಾರ ಮೆಮೋರಿಯಲ್ ಟ್ರಸ್ಟ” ಶ್ರೀ ಎಸ್.ಎಸ್.ವಿದ್ವಾನ್ ಅವರ ಸಾಮಾಜಿಕ, ಶೈಕ್ಷಣಿಕ, ಚಿಂತನೆಗಳ ಸಾಕಾರದೊಂದಿಗೆ ರಚನೆಗೊಂಡಿತು. 

ಮನುಷ್ಯ ಸಂಘ ಜೀವಿ, ಸಮಾಜ ನಮಗೇನು ಮಾಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು..? ಎಂಬುದು ಬಹಳ ಮುಖ್ಯ, ಇಂಥ ಮೌಲ್ಯಯುತ ವಿಚಾರಗಳನ್ನು ಮೈಗೂಡಿಸಿಕೊಂಡು ಬಡತನದಿಂದ ಬಂದ ಶ್ರೀ ವಿದ್ವಾನ ಅವರು, ನಲಿವಿಗಿಂತ ಹೆಚ್ಚು ನೋವನ್ನು ಉಂಡವರು, ಅಂತಲೇ ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ದೊರಕಿಸಿ ಕೊಡುವ ವಿಚಾರದಿಂದ ಸರ್ಕಾರದ ಮಾನ್ಯತೆಯೊಂದಿಗೆ ಪ್ರಾಥಮಿಕ ಶಾಲೆಯನ್ನು ತೆರೆಯಲು ಮುಂದಾದರು. ಶಾಲೆಯು ಚೆನ್ನಾಗಿಯೇ ನಡೆಯುತಿತ್ತು, ಆದರೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ, ಕೆಲವು ವರ್ಷಗಳ ಕಾಲ ನಡೆದು ಸ್ಥಗಿತಗೊಳ್ಳುತ್ತದೆ. ದೃತಿಗೆಡದೇ ತಮ್ಮ ಸಾಹಿತ್ಯ ಅಭಿರುಚಿಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ವಯೋ ವೃದ್ಧ ಕಾಯಿಲೆಯಿಂದಾಗಿ ಶ್ರೀ ಎಸ್.ಎಸ್.ವಿದ್ವಾನ್ ಅವರು ದಿನಾಂಕ 27-08-2016 ರಂದು ನಿಧನರಾಗುತ್ತಾರೆ, ಅವರ ಅಂತಿಮ ಯಾತ್ರೆಯ ದಿನದಂದು ದೇಹ ಅಗ್ನಿ ಸ್ಪರ್ಶವಾದ ಬಳಿಕ ಸುಡುವ ಬೆಂಕಿಯ ಜ್ವಾಲೆ, ದಟ್ಟನೆಯ ಕಪ್ಪು ಹೊಗೆ, ಅಲ್ಲಿ ಕುಳಿತಿದ್ದ ಅವರ ಸುಪುತ್ರ ಡಾ. ವಿಶ್ವನಾಥನ ಮೈ-ಮನಸೆಲ್ಲ ಆವರಿಸಿಕೊಂಡಂತಾಗಿ, ತದೇಕ ಚಿತ್ತದಿಂದ, ಬೆಂಕಿಯ ಜ್ವಾಲೆಯಲ್ಲಿ ತಂದೆಯ ಪ್ರೇಮ-ವಾತ್ಸಲ್ಯಗಳು ಅಲೆ-ಅಲೆಯಾಗಿ ಹೃದಯ ಕಲಕಿದಂತಾಗುತ್ತದೆ.  ಮನಸಲ್ಲಿ ಒಂದು ದೃಢ ನಿರ್ಧಾರ ಬರುತ್ತದೆ. ಚಿಕ್ಕವರಿದಾಗ “ಅಪ್ಪ” ಕಲಿಸಿದ ಒಳ್ಳೆಯ ನಡತೆ, ಸಂಸ್ಕಾರ ಅವರು ಹಾಕಿಕೊಟ್ಟ ಸನ್ಮಾರ್ಗ, ಬಿಟ್ಟು ಹೋದ ಆದರ್ಶಗಳು ಲಂಡನ ದೇಶದಲ್ಲಿ ವೈದ್ಯಕೀಯ ಸೇವೆಯಲ್ಲಿರುವ ಡಾ. ವಿಶ್ವನಾಥ ಅವರನ್ನು ಕಾಡುತ್ತವೆ.  ಆಗ ಮನದಲ್ಲಿ ಮೂಡಿದ ದೃಢ ನಿರ್ಧಾರ ತಂದೆಯ ಈಡೇರದ ಆಸೆ-ಆಕಾಂಕ್ಷೆಗಳು ಅವರಲ್ಲಿದ್ದ ಗುರಿಯೆಡೆಗೆ ಕೊಂಡೊಯ್ಯುತ್ತದೆ. 

ಡಾ|| ವಿಶ್ವನಾಥ ಅವರು ಗುರುಕುಮಾರ ಮೆಮೋರಿಯಲ್ ಟ್ರಸ್ಟನ ಧೇಯೋದ್ದೇಶಗಳನ್ನು ಅವಲೋಕನ ಮಾಡಿ, ತಂದೆಯವರಲ್ಲಿ ಇದ್ದಂತಹ ಆದರ್ಶಗಳನ್ನು ಮನನ ಮಾಡಿಕೊಂಡು ಟ್ರಸ್ಟನ ಶ್ರೇಯೋಭಿವೃದ್ಧಿಗೆ ಹೆಜ್ಜೆಯಿಡುತ್ತಾರೆ.  ತಂದೆಯವರು ಆರಂಭ ಮಾಡಿ ಮುಚ್ಚಿ ಹೋದ ಶಾಲೆ ಮತ್ತು ಪಾಳುಬಿದ್ದ ಕಟ್ಟಡವನ್ನು ಸುಸಜ್ಜಿತವಾಗಿ, ನವೀಕರಣ ಮಾಡುತ್ತಾರೆ.  ಮುಂದೆ ಮಕ್ಕಳ ಪೂರ್ವ ಪ್ರಾಥಮಿಕ ಶಾಲೆ ಜೂನ-2017 ರಲ್ಲಿ ಉತ್ತಮ ಮೂಲಭೂತ ಸೌಕರ್ಯಗಳೊಂದಿಗೆ ಪ್ರಾರಂಭವಾಗುತ್ತದೆ. 

ಇಂದಿನ ಕಾಲಮಾನದಲ್ಲಿ ಪ್ರತಿಯೊಬ್ಬರು ವ್ಯವಹಾರಿಕವಾಗಿಯೇ ಆಲೋಚನೆ ಮಾಡುತ್ತಾರೆ ಇಂಥವರ ಮಧ್ಯದಲ್ಲಿ ನಮ್ಮ ನಡುವೆ ವಿಭಿನ್ನವಾಗಿ ಸಮಾಜದ ಬಗ್ಗೆ ಕಳಕಳಿ, ಚಿಂತನೆ ಮಾಡುವ ಡಾ. ವಿಶ್ವನಾಥ ಸಿದ್ದಪ್ಪ ಅವರು ಬಹಳ ಅಪರೂಪದಲ್ಲಿ ಅನುಕರಣೀಯರಾಗುತ್ತಾರೆ. ಜೀವನವೇ ವ್ಯವಹಾರಿಕವಾಗಿ ಇರುವಾಗ ಇವರು ಲಂಡನ ದೇಶದಲ್ಲಿ ತಮ್ಮ ವೈದ್ಯಕೀಯ ಸೇವೆಯನ್ನು ಮುಂದುವರೆಸಿಕೊಂಡು, ಹುಬ್ಬಳ್ಳಿ ಮಹಾನಗರದಲ್ಲಿ ಕೂಡ ಒಂದು ಆಸ್ಪತ್ರೆಯನ್ನೇ ಕಟ್ಟಿಸಬಹುದಿತ್ತು, ಆದರೆ ಇವರು ತಮ್ಮ ರಕ್ತಗತವಾಗಿ ಬಂದ ಸಮಾಜದ ಏಳ್ಗೆಗೆ ಕಿಂಚಿತ್ತಾದರೂ ಋಣಸಂದಾಯ ಮಾಡಬೇಕೆಂಬ ತಂದೆಯವರ ಸೇವಾಮನೋಭಾವದಂತೆ ಸದುದ್ದೇಶವನ್ನು ಇಟ್ಟುಕೊಂಡು, ಗುರುಕುಮಾರ ಮೆಮೋರಿಯಲ್ ಟ್ರಸ್ಟನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ತಮ್ಮ.ಅನುಪಸ್ಥಿತಿಯಲ್ಲಿಯೇ ಉತ್ತಮವಾಗಿ ಕಾರ್ಯನಿರ್ವಹಿಸುವ ಉತ್ಸಾಹಿಗಳ ಕಾರ್ಯಪಡೆಯೊಂದಿಗೆ “ಬಾಳೋಣ-ಬಾಳಿಸೋಣ” ಎಂಬ ಧಾರ್ಮಿಕವಾಣಿಯೊಂದಿಗೆ, ಸಕಲ ಜೀವಿಗಳಲ್ಲೂ ಮಾನವೀಯತೆಯ ಒಳಿತನ್ನು ಬಯಸುವಂತ ಮೌಲ್ಯಗಳನ್ನು ಹೃದಯದಲ್ಲಿ ಇಟ್ಟುಕೊಂಡು, ಶಿಕ್ಷಣ ವಂಚಿತ ಸಮುದಾಯಗಳಿಗೆ ಶಿಕ್ಷಣ ದೊರೆಯಲೇಬೇಕೆಂದು ತಂದೆಯವರು ಬಿಟ್ಟು ಹೋದ ಸೇವಾ ಕಾರ್ಯಗಳನ್ನು ಭರತನಂತೆ ತಲೆಯ ಮೇಲೆ ಹೊತ್ತು, ಕಂಕಣಬದ್ಧರಾಗಿ, ಹಗಲಿರುಳು ಟ್ರಸ್ಟಿನ ಬೆಳವಣಿಗೆಗಾಗಿ ಶ್ರಮಿಸುತ್ತ ಮುನ್ನಡೆ ಸಾಧಿಸುವತ್ತ ಕಿರುಹೆಜ್ಜೆಗಳನ್ನು ಇಡುತ್ತಿದ್ದಾರೆ. 

ಎಸ್.ಎಸ್.ವಿದ್ವಾನ್ ಅವರು ಸಾಹಿತ್ಯದೊಂದಿಗೆ ಕೂಡ ಸಂಗೀತ ಪ್ರೇಮಿಗಳಾಗಿದ್ದರು, ಸ್ವತ: ತಾವೇ ನಗರದ ದೇಶಪಾಂಡೆ ನಗರದಲ್ಲಿದ್ದ ಪಂಡಿತ ಶ್ರೀ ಅಂಬೇಕರ ಗುರುಗಳ ಬಳಿ ಕೆಲವು ವರ್ಷಗಳ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದರು, ಹಾರ್ಮೊನಿಯಮ್ ಕೂಡ ನುಡಿಸುತ್ತಿದ್ದರು ಮೈಸೂರಿನಲ್ಲಿ ಸಂಗೀತ ಪಾಠಶಾಲೆಯನ್ನು ಕೂಡ ನಡೆಸುತ್ತಿದ್ದರು. 

ಈ ದಿಸೆಯಲ್ಲಿ ತಂದೆಯವರಿಗೆ ಸಂಗೀತದ ಮೇಲಿನ ಅಪಾರ ಆಸಕ್ತಿಯನ್ನು ಮನಗಂಡ ಡಾ. ವಿಶ್ವನಾಥ ಅವರು ಭಾರತೀಯ ಶಾಸ್ತ್ರೀಯ ಸಂಗೀತವು ಪಾಶ್ಚಿಮಾತ್ಯ ಸಂಗೀತದ ಗದ್ದಲದ ಮಧ್ಯದಲ್ಲಿ ನಶಿಸಿ ಹೋಗುವಂತ ಸ್ಥಿತಿಯಲ್ಲಿ ಇರುವಾಗ, ಯಾವುದೇ ವ್ಯಾಪಾರಿ ಮನೋಭಾವ ಹೊಂದದೇ ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಉಳಿಸಿ-ಬೆಳೆಸುವ ಹಿತದೃಷ್ಠಿಯಿಂದ ‘ಎಸ್.ಎಸ್.ವಿದ್ವಾನ್ ಮೆಮೋರಿಯಲ್ ಭಾರತೀಯ ಶಾಸ್ತ್ರೀಯ ಸಂಗೀತ ಪಾಠಶಾಲೆ “ನಂದನಂ” ದಿನಾಂಕ : 09-09-2017 ರಂದು ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಾಯಕರಾದ ಪಚಿಡಿತ್ ಶ್ರೀ ಗಣಪತಿ ಭಟ್ ಹಾಸಣಗಿಯವರ ಅಮೃತ ಹಸ್ತದಿಂದ ಲೋಕಾರ್ಪಣೆಯಾಯಿತು. 

ಇಂದು “ನಂದನಂ” ಸಂಗೀತ ಪಾಠಶಾಲೆಯು ಭರತನಾಟ್ಯ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸರಿಗಮಪದನಿಸ ಮತ್ತು ಥೈ ಥೈ ಥೈ ತಕ್ ಎಂಬ ಸ್ವರಗಳ ಜೊತೆಗೆ ಹೆಜ್ಜೆಯ ಸದ್ದನು ಅಲೆ ಅಲೆಯಾಗಿ ತೇಲುವಂತೆ ನಿತ್ಯವೂ ಕೇಳುಗರ ಮನತಣಿಸುತ್ತಿದೆ.  ಡಾ: ವಿಶ್ವನಾಥ ಸಿದ್ದಪ್ಪ ಅವರಲ್ಲಿ ಒಂದು ಕ್ರೀಯಾಶೀಲವಾದ ಸುಪ್ತ ಮನಸ್ಸು, ಸಮಾಜಮುಖಿ ಚಿಂತನೆಗಳು, ಕಲುಷಿತಗೊಂಡ ಸಮಾಜಕ್ಕೆ ವಿಮೋಚನೆಯ ಮಾರ್ಗದೆಡೆಗೆ ಕೊಂಡೊಯ್ಯುವ ಅವರ ಯೋಚನೆಗಳು, ಯೋಜನೆಗಳು “ಗುರುಕುಮಾರ ಮೆಮೋರಿಯಲ್ ಟ್ರಸ್ಟನ” ಮೂಲಕ ಸಮಾಜಕ್ಕೊಂದು ಹೊಸದಾರಿ ಕಲ್ಪಿಸುವ ನಿಟ್ಟಿನಲ್ಲಿ ತನ್ನ ಗುರುತರವಾದ ಹೆಜ್ಜೆಗಳನ್ನು ಇಡುತ್ತಾ ಸಾಗುತ್ತಿದೆ. 

-ಕೃಷ್ಣಾ ಜಕ್ಕಪ್ಪನವರ