• Pupils   |
  • Parents   |
  • Comunity

ಅರಳಿ ಅಮರನಾದ – ಗುರುಕುಮಾರ

ಬೆಂಗಳೂರಿನ ಹನುಮಂತನಗರದ ಮನೆಯೊಂದರ ಮುಂದೆ, ರಸ್ತೆಯ ತುಂಬಾ ಭಾರಿ ಜನದಟ್ಟಣೆ ಹಾಗೂ ಯುವಕರ ದಂಡೇದಂಡು ಕೆಲವರ ಮುಖದಲ್ಲಿ ಏನೋ ಕಳೆದುಕೊಂಡಂತಹ ಭಾವ. ನಡೆದಾಡುವ ಜನರು-ಏನಾಯಿತು-ಯಾರು ಬಂದಿದ್ದಾರೆ. ಸಿನಿಮಾ ಶೂಟಿಂಗ್ ತಾನೇ... ಹೀಗೆ ಹತ್ತಾರು ಪ್ರಶ್ನೆಗಳ ಸರಮಾಲೆ, ಮಧ್ಯದಲ್ಲಿ ಶ್ರೀ ಆಂಜನೇಯನ ಗುಡಿಯಲ್ಲಿ ಹರಿ ಕೀರ್ತನೆ ಮಾಡಲು ಬಂದಂಥ ಪ್ರಸಿದ್ಧ ಹರಿಕಥೆ ಕೀರ್ತನಕಾರರಾದ ಶ್ರೀ ಗುರುರಾಜ ನಾಯ್ಡುರವರು ಕೂಡ ಜನಸಂದಣಿಯ ನಡುವೆ ಹಾದು ಹೋಗುವ ಸಮಯದಲ್ಲಿ ಅಲ್ಲಿ ನೆರೆದವರನ್ನೂ ವಿಚಾರಿಸುತ್ತಾರೆ. ಏನ್ ಸ್ವಾಮೀ ಏನಾಗಿದೆ ಇಲ್ಲಿ, ಅದರಲ್ಲಿ ಒಬ್ಬ ಗುರುಗಳೇ ಕ್ರಿಕೆಟ ಆಡುವ ಸಮಯದಲ್ಲಿ ಕೇವಲ 23-24 ವರ್ಷದ ಒಳ್ಳೆಯ ಯುವಕ ಹೃದಯಾಘಾತವಾಗಿ ತೀರಿ ಹೋದ ಎಂದು ಹೇಳುತ್ತಾನೆ. 

ಗುರುಗಳು, ಅಯ್ಯೋ ಇವತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಅಲ್ಲವೇ ದೇವರ ಆಟದ ಮುಂದೆ ಮನುಷ್ಯರ ಲೆಕ್ಕಾಚಾರ ತಲೆಕೆಳಗಾಗುತ್ತದೆ.  ಇದು ಪುಣ್ಯದ ಸಾವು ಎಂದು ಅವರು ಹೇಳಿದ ಮಾತು, ಅಲ್ಲಿ ಸೇರಿದ ಜನರ ಬಾಯಿಂದ ಹೌದು-ಹೌದು ಎಂದು ಪ್ರತಿಧ್ವನಿಸಿದಂತಾಯಿತು.  ಅಂದು ಮನೆಯ ಮುಂದೆ ಜನಜಾತ್ರೆಯಿತ್ತು. ಅರಳಿ-ಸುವಾಸನೆ ಬೀರಬೇಕಾದ ಹೂವು, ಕರುಳಕುಡಿಯನ್ನು ಕಳೆದುಕೊಂಡ ತಾಯಿಯ ದು:ಖದ ಜೋಗುಳವು ಮಾರ್ಧನಿಸುತ್ತಿತ್ತು.  

ಹಿರಿಯ ಸುಪುತ್ರನ ಅಕಾಲಿಕ ಅಗಲಿಕೆ-ಸಾಹಿತಿ, ಕವಿ, ನಾಟಕ, ಕಥೆಗಾರ, ವಿದ್ವಾನ್ ಅವರ ಭಾರವಾದ ಹೃದಯದಲ್ಲಿ ದು:ಖ ಕಾಣದಂತೆ ಹೆಪ್ಪುಗಟ್ಟಿ-ಕಣ್ಣಂಚಲ್ಲಿ ಕಣ್ಣೀರಧಾರೆ ! ಭವಿಷ್ಯದ ಆಶಾಕಿರಣವಾದ ಅಣ್ಣನನ್ನು ಕಳೆದುಕೊಂಡ ತಮ್ಮಂದಿರಲ್ಲಿ ತಡೆಯಲಾರದ ದು:ಖದ ನರಳಿಕೆ. 

ಈ ಘಟನೆಯು ನಡೆದದ್ದು, 1988 ರ ಸೆಪ್ಟಂಬರ 3 ರಂದು ಶ್ರಾವಣ ಮಾಸದ ತಿಂಗಳಲ್ಲಿ ಎಂಥವರಿಗಾದರೂ ಆಘಾತಕ್ಕೀಡು ಮಾಡುವಂಥ ದುರಂತ ನಡೆದು ಹೋಯಿತು.  ಕನ್ನಡ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಅಪಾರ ಹೆಸರು ಗಳಿಸಿದ, ಹಿರಿಯ ನೋಂದಣಿ ಅಧಿಕಾರಿ, ಕವಿ-ಕಥೆಗಾರ ಎಸ್.ಎಸ್.ವಿದ್ವಾನ್ ಅವರ ಬದುಕಿನಲ್ಲಿ ದೇವರು ಬರೆದ ಕಥೆಯೊಂದರ ನಾಯಕನನ್ನು ವಿಧಿಯು ತನ್ನ ಕೈವಶ ಮಾಡಿಕೊಂಡಿದ್ದು ಕೂಡ ನೈಜಕಥೆಯಾಯಿತು. 

ಸಾಹಿತಿ-ಕವಿ-ನಾಟಕ-ಕಥೆ ಕಾದಂಬರಿ, ಚಿತ್ರ ಸಾಹಿತಿ ಎಸ್.ಎಸ್. ವಿದ್ವಾನ ಮತ್ತು              ಶ್ರೀಮತಿ ಯಶೋದಾದೇವಿ ವಿದ್ವಾನ ದಂಪತಿಗಳು, ಅಧ್ಯಾತ್ಮ ಮತ್ತು ಧಾರ್ಮಿಕತೆಯಲ್ಲಿ ಅಪಾರ ನಂಬಿಗೆಯಿಟ್ಟು, ಶಿವ-ಶರಣರ ತತ್ವ-ಆದರ್ಶಗಳನ್ನು ಮೈಗೂಡಿಸಿಗೊಂಡಂತ ಸಾತ್ವಿಕ ದಂಪತಿಗಳ ಚೊಚ್ಚಲು ಮಗನೇ “ಗುರುಕುಮಾರ” ಈತನು ವಿಜಾಪೂರ ಜಿಲ್ಲೆ, ಮುದ್ದೇಬಿಹಾಳ ತಾಲೂಕಿನ ಐತಿಹಾಸಿಕ ಮೆರೆದ ಗ್ರಾಮ “ರಕ್ಕಸಗಿ” ಯಲ್ಲಿ ದಿನಾಂಕ : 19-09-1964 ರಲ್ಲಿ ಜನನ. ತಂದೆ-ತಾಯಿಯ ಮುದ್ದಿನ ಸುಪುತ್ರನಿಗೆ “ಗುರುಕುಮಾರ” ಎಂದು ನಾಮಕರಣ

ಮಕ್ಕಳ ವಯೋ ಸಹಜ ಬಾಲ್ಯ ಜೀವನ, ತಂದೆಯ ಸರ್ಕಾರಿ ಹುದ್ದೆ, ಊರಿಂದ ಊರಿಗೆ ವರ್ಗಾವಣೆ, ಗುರುಕುಮಾರನ ಬಾಲ್ಯ ಜೀವನದೊಂದಿಗೆ ಪ್ರಾಥಮಿಕ ಶಿಕ್ಷಣವೂ ಗದಗ ಜಿಲ್ಲೆಯ ಶಿರಹಟ್ಟಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಆರಂಭವಾಗುತ್ತದೆ.  ತದನಂತರ ಪುನ: ವರ್ಗಾವಣೆಯಿಂದ ಬೆಳಗಾವಿ ಜಿಲ್ಲೆಯ “ಬೈಲಹೊಂಗಲ’ ದಲ್ಲಿ ಶಿಕ್ಷಣ ಮುಂದುವರೆದು, 1978 ರಲ್ಲಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ 9ನೇ ತರಗತಿಗೆ ಪ್ರವೇಶ, 1980 ರಲ್ಲಿ ಹತ್ತನೇ ತರಗತಿಯಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣ. 

1981-82 ರಲ್ಲಿ ನ್ಯಾಶನಲ್ ಕಾಲೇಜ, ಬಸವನಗುಡಿಯಲ್ಲಿ ಪಿ.ಯು.ಸಿ. ದ್ವಿತೀಯ ವಿಜ್ಞಾನ ಪರೀಕ್ಷೆಯಲ್ಲಿ ಉತ್ತೀರ್ಣ. ಬಸವನಗುಡಿಯ ಬಿ.ಎಂ.ಎಸ್. ಇಂಜನೀಯರಿಂಗ್ ಕಾಲೇಜಿಗೆ ಪ್ರವೇಶ. ಬಿ.ಇ. ಸಿವ್ಹಿಲ್ ಅಧ್ಯಯನದ ನಂತರ ಖಾಸಗಿ ಕಂಪನಿಯಲ್ಲಿ ಸ್ವಲ್ಪದಿನ ಉದ್ಯೋಗ ಮಾಡುವನು, ಭಾರತೀಯ ಆಡಳಿತ ಸೇವೆಯಲ್ಲಿ (ಐ.ಎ.ಎಸ್.) ಪರೀಕ್ಷೆಯಲ್ಲಿ ಉತ್ತೀರ್ಣನಾದ ಗುರುಕುಮಾರ ಇವರು ನಮ್ಮೆಲ್ಲರ ಮಧ್ಯದಲ್ಲಿ ಇದ್ದಿದ್ದರೆ, ನಮ್ಮ ಕನ್ನಡನಾಡಿನ ಯಾವುದೇ ಜಿಲ್ಲೆಯಲ್ಲಿ ಉನ್ನತ ಅಧಿಕಾರಿಯಾಗಿ ಸೇವೆಯಲ್ಲಿರುತ್ತಿದ್ದರು. 

ಹೂವು ಅರಳಿ ಸುವಾಸನೆ ಬೀರಿ, ಕಂಪನ್ನು ಬೀರುವ ಮುನ್ನವೇ ಗುರುಕುಮಾರ ತನ್ನ ಮಹತ್ತರ ಆಸೆ-ಆಕಾಂಕ್ಷೆಯೊಂದಿಗೆ ತನ್ನ ಉನ್ನತ ಶಿಕ್ಷಣ ಸಾಧನೆಯನ್ನು ಛಲದಿಂದ ಸಾಧಿಸಿ, ನಾಡಿನ ಜನಪರ ದಕ್ಷ ಅಧಿಕಾರಿಯಾಗಿ ಹೊರ-ಹೊಮ್ಮುವ ಮುಂಚೆಯೇ ಅಕಾಲಿಕ ಸಾವಿನ ಸೆರೆಗೆ ಸಿಲುಕಿದ್ದು ವಿಧಿಯ ಅಟ್ಟಹಾಸ ಎನ್ನದೇ ಬೇರೆನಿಲ್ಲ. 

“ದೇವರ ಆಟದ ಮುಂದೆ ಮನುಷ್ಯರ ಲೆಕ್ಕಾಚಾರ ತಲೆಕೆಳಗಾಗುತ್ತದೆ-ಇದು ಪುಣ್ಯದ ಸಾವು ! ಎಂದು ನುಡಿದ ಹರಿಕೀರ್ತನ ಗುರುಗಳಾದ ಶ್ರೀ ಗುರುರಾಜ ನಾಯ್ಡು ರವರ ಮಾತುಗಳು ಇಂದಿಗೂ-ಎಂದೆಂದಿಗೂ ಪ್ರಸ್ತುತ ಎನಿಸುತ್ತವೆ.  ಅಂದು ಗುರುಕುಮಾರನು ಕ್ರಿಕೆಟ್ ಆಡುವಾಗ, ಚೆಂಡನ್ನು ಸಿಕ್ಸರ್ ಹೊಡೆದು ಒಡನಾಡಿ ಗೆಳೆಯರ ಪ್ರೀತಿ-ಚಪ್ಪಾಳೆಗೆ ಪಾತ್ರನಾದ. ಚದುರಂಗದಾಟದಲ್ಲಿ ಎದುರಾಳಿಗೆ ನೀರು ಕುಡಿಸುವಂತೆ ಮಾಡುವ ಚತುರನಾದ, ಬಹಳ ನಿಪುಣನಾದರೂ “ಜೀವನದ ಚದುರಂಗದ ಆಟದಲ್ಲಿ ನಿಜಕ್ಕೂ ಅಪಜಯನಾದ... ಅರಳಿ ಅಮರನಾದ. 

-ಕೃಷ್ಣಾ ಜಕ್ಕಪ್ಪನವರ, ಹುಬ್ಬಳ್ಳಿ